Published on: April 15, 2025

ಸೈಬರ್ ಕಮಾಂಡ್ ಕೇಂದ್ರ

ಸೈಬರ್ ಕಮಾಂಡ್ ಕೇಂದ್ರ

ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿ ಸೈಬರ್‌ ವಂಚನೆಗಳು ಹೆಚ್ಚುತ್ತಿದ್ದು, ಅಪರಾಧಗಳೂ ಏರಿಕೆಯಾಗುತ್ತಿವೆ, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರ ಇವುಗಳಿಗೆ ಅಂಕುಶ ಹಾಕಲು ತೀರ್ಮಾನಿಸಿದ್ದು, ಈ ಸಂಬಂಧ ದೇಶದಲ್ಲೇ ಮೊದಲ ಸೈಬರ್ ಕಮಾಂಡ್ ಕೇಂದ್ರವನ್ನು ಸ್ಥಾಪಿಸಿದೆ.

ಮುಖ್ಯಾಂಶಗಳು

  • ಇದನ್ನು ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಐಪಿಎಸ್ ಅಧಿಕಾರಿ ಮುನ್ನಡೆಸಲಿದ್ದಾರೆ
  • ಡಿಜಿಪಿ ಶ್ರೇಣಿಯ ಪ್ರಣವ್‌ ಮೊಹಾಂತಿ ಅವರನ್ನು ಇದರ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
  • ಈ ಹಿಂದೆ ಸೈಬರ್‌ ಅಪರಾಧ ಮತ್ತು ಮಾದಕ ದ್ರವ್ಯ ವಿಭಾಗವು ಅಪರಾಧ ತನಿಖಾ ವಿಭಾಗದ (ಸಿಐಡಿ) ಭಾಗವಾಗಿತ್ತು. ಇದೀಗ ಪ್ರತ್ಯೇಕ ವಿಭಾಗವಾಗಿ ಕಾರ್ಯಾಚರಿಸಲಿದೆ.
  • ಒಟ್ಟು 45 ಪೊಲೀಸ್ ಠಾಣೆಗಳನ್ನು ಈ ವಿಶೇಷ ಘಟಕದ ವ್ಯಾಪ್ತಿಗೆ ತರಲಾಗುತ್ತದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ದಾಖಲಾಗಿರುವ ಒಟ್ಟು ಅಪರಾಧ ಪ್ರಕರಣಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಪ್ರಮಾಣವೇ ಸರಿಸುಮಾರು ಶೇ. 20ರಷ್ಟಿದೆ. ಇವುಗಳ ನಿರ್ವಹಣೆಗೆ ಈ ಸೈಬರ್‌ ಕಮಾಂಡ್‌ ಸೆಂಟರ್‌ನಿಂದ ಅನುಕೂಲವಾಗಲಿದೆ.
  • ಡಿಜಿಪಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಗಳು, ರಾಜ್ಯ ಮಟ್ಟದ ಅಧಿಕಾರ ವ್ಯಾಪ್ತಿಯೊಂದಿಗೆ ಸಿಐಡಿ, ಹಾಗೆಯೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಕಮಾಂಡ್ ಘಟಕವನ್ನು ಸಹ ಈ ಸೈಬರ್ ಕಮಾಂಡ್ ಸೆಂಟರ್‌ನ ವ್ಯಾಪ್ತಿಗೆ ತರಲಾಗುತ್ತದೆ.

ಉದ್ದೇಶ

ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಒಟ್ಟಾರೆಯಾಗಿ 52,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಮಂಚೂಣಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕ ಸೃಜಿಸುವ ಅವಶ್ಯಕತೆ ಕಂಡುಬರುತ್ತದೆ

ಏನಿದರ ಕೆಲಸ?

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಆನ್‌ಲೈನ್ ಅಪರಾಧಗಳು, ಸೆಕ್ಸ್‌ಟಾರ್ಷನ್, ಡಿಜಿಟಲ್ ಬಂಧನ, ಡೀಪ್‌ಫೇಕ್‌ಗಳು, ಗುರುತಿನ ಕಳ್ಳತನ, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ಔಟ್ರೀಚ್, ತಪ್ಪು ಮಾಹಿತಿ, ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್‌ವೇರ್, ಸ್ಟಾಕಿಂಗ್‌ ಸೇರಿದಂತೆ ಸೈಬರ್ ವಂಚನೆಗಳನ್ನು ಇದು ಪರಿಶೀಲಿಸಲಿದೆ.

ನಿಮಗಿದು ತಿಳಿದಿರಲಿ

ಇದಷ್ಟೇ ಅಲ್ಲ 2001ರಲ್ಲಿ ಭಾರತದ ಮೊದಲ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಕರ್ನಾಟಕವೇ ಸ್ಥಾಪಿಸಿತ್ತು. ಹೆಚ್ಚುತ್ತಿದ್ದ ಸೈಬರ್ ಅಪರಾಧಗಳನ್ನು ನಿಭಾಯಿಸಲೆಂದೇ ಬೆಂಗಳೂರಿನ ಸಿಐಡಿಯಲ್ಲಿ ಇದನ್ನು ಪ್ರಾರಂಭಿಸಲಾಗಿತ್ತು.